ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಈಗ ಇದನ್ನು ಚಂದನ್ನಗರ ಎನ್ನುತ್ತಾರೆ. ಕೊಲ್ಕತದ ವಾಯವ್ಯಕ್ಕೆ 34 ಕಿಮೀ ದೂರದಲ್ಲಿ ಉ. ಅ. 220 52' ಮತ್ತು ಪು.ರೇ. 880 22' ನಲ್ಲಿ ಹೂಗ್ಲಿ ನದಿಯ ಬಲದಂಡೆಯ ಮೇಲಿರುವ ಈ ಪಟ್ಟಣ ಹಿಂದೆ ಫ್ರೆಂಚರ ವಸಾಹತಾಗಿತ್ತು. ಜನಸಂಖ್ಯೆ 1,50,000(2001) ವಿಸ್ತೀರ್ಣ 20 ಚ.ಕಿಮೀ. ಯುರೋಪಿನ ಅನೇಕ ದೇಶಗಳವರು ಭಾರತದೊಂದಿಗೆ ನೇರ ವ್ಯಾಪಾರ ಮಾಡಲು ಈ ದೇಶಕ್ಕೆ ಬಂದಾಗ ಫ್ರೆಂಚರೂ ಈ ದೇಶದ ವಿವಿಧ ಭಾಗಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು. 1674ರಲ್ಲಿ ಅಥವಾ 1676ರಲ್ಲಿ ಫ್ರೆಂಚರ ವ್ಯಾಪಾರಕೋಠಿ ಆರಂಭವಾಯಿತು. 1688ರಲ್ಲಿ ಇವರು ಔರಂಗ್ಜೇಬನಿಂದ ಚಂದ್ರನಗರ ಹಾಗೂ ಅದರ ಸುತ್ತಣ 31/2 ಕಿಮೀ ಪ್ರದೇಶವನ್ನು ಪಡೆದುಕೊಂಡರು. ತರುವಾಯ ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಲಾಯಿತು. ಈ ಊರು ಹೂಗ್ಲಿ ನದಿಯ ದಂಡೆಯ ಮೇಲಿದ್ದುದರಿಂದ ನೌಕಾ ವ್ಯಾಪಾರಕ್ಕೂ ಅನುಕೂಲವಾಗಿತ್ತು. ಭಾರತದ ಇತರ ಕೆಲವು ಪ್ರದೇಶಗಳಂತೆ ಬಂಗಾಳದಲ್ಲೂ ಫ್ರೆಂಚರಿಗೂ ಬ್ರಿಟಿಷರಿಗೂ ರಾಜಕೀಯ ಪೈಪೋಟಿ ಏರ್ಪಟ್ಟಿತ್ತು. 1757ರಲ್ಲಿ ಬ್ರಿಟಿಷರು ಚಂದ್ರನಗರವನ್ನು ಮುತ್ತಿದರು. ಆಗ ಕ್ಲೈವ್ ಭೂಸೈನ್ಯದ ದಂಡನಾಯಕತ್ವವನ್ನೂ ಅಡ್ಮಿರಲ್ ವ್ಯಾಟ್ಸನ್ ನೌಕಾಪಡೆಯ ನೇತೃತ್ವವನ್ನೂ ವಹಿಸಿದ್ದರು. ಚಂದ್ರನಗರ ಬ್ರಿಟಿಷರ ವಶವಾಯಿತು. ಬ್ರಿಟಿಷರು ಇಲ್ಲಿ ಅನೇಕ ಮನೆಗಳನ್ನು ನಾಶಮಾಡಿದರು, ಕೋಟೆಯನ್ನು ಹಾಳುಗೆಡವಿದರು. ಈ ಊರಿನ ಪತನದಿಂದ ಬಂಗಾಲದಲ್ಲಿ ಫ್ರೆಂಚರ ಬಲ ಕುಸಿಯಿತು.

ಯುರೋಪಿನಲ್ಲಿ ನಡೆದ ಏಳು ವರ್ಷಗಳ ಯುದ್ಧದ ಅನಂತರ ಏರ್ಪಟ್ಟ ಶಾಂತಿ ಕೌಲಿನಂತೆ 1765ರಲ್ಲಿ ಬ್ರಿಟಿಷರು ಚಂದ್ರನಗರವನ್ನು ಫ್ರೆಂಚರಿಗೆ ಹಿಂದಿರುಗಿಸಿದರಾದರೂ 1784ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳ ನಡುವೆ ಮತ್ತೆ ವಿರಸ ಬೆಳೆದಾಗ ಬ್ರಿಟಿಷರು ಈ ಊರನ್ನು ಪುನಃ ವಶಪಡಿಸಿಕೊಂಡರು. 1802ರಲ್ಲಿ ಆದ ಆಮಿಯೆನ್ಸ್ ಶಾಂತಿ ಕೌಲಾದಾಗ ಇದು ಮತ್ತೆ ಫ್ರೆಂಚರ ಕೈಸೇರಿತು. ಅದೇ ವರ್ಷ ಬ್ರಿಟಿಷರು ಪುನಃ ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ರೀತಿ ಪದೇ ಪದೇ ಇದರ ಒಡೆತನದಲ್ಲಿ ಬದಲಾವಣೆ ಆದ ಬಳಿಕ ಅಂತಿಮವಾಗಿ 1815ರ ಒಪ್ಪಂದಕ್ಕನುಗುಣವಾಗಿ ಇದು ಫ್ರೆಂಚರ ಕೈಸೇರಿತು. 1950ರ ವರೆಗೂ ಅವರ ವಶದಲ್ಲೇ ಉಳಿದಿತ್ತು.

ಡೂಪ್ಲೆಕ್ಸ್ ಫ್ರೆಂಚ್ ಭಾರತದ ಗವರ್ನರಾಗಿ ಬಂದಾಗ ಚಂದ್ರನಗರದ ಮಹತ್ತ್ವ ಅಧಿಕವಾಯಿತು. ಆಗ ಇದನ್ನು ಅಭಿವೃದ್ಧಿಗೊಳಿಸಲಾಯಿತು. ಆಗ ಇಟ್ಟಿಗೆಗಳನ್ನು ಬಳಸಿ 2,000 ಮನೆಗಳು ನಿರ್ಮಾಣವಾದುವು. ಗಣನೀಯ ಪ್ರಮಾಣದಲ್ಲಿ ವ್ಯಾಪಾರ ಬೆಳೆಯಿತು. 1880ರಲ್ಲಿ ಇಲ್ಲಿ ಒಂದು ದೊಡ್ಡ ರೋಮನ್ ಕೆಥೊಲಿಕ್ ಚರ್ಚ್ ನಿರ್ಮಾಣವಾಯಿತು. 1882ರಲ್ಲಿ ಸ್ಥಾಪಿಸಿದ ಕಾಲೇಜ್ ಡೂಪ್ಲೆಕ್ಸ್ ಈಗ ಒಂದು ಪ್ರಮುಖ ಶಿಕ್ಷಣಸಂಸ್ಥೆಯಾಗಿದೆ. ಹಿಂದೆ ಸರ್ಕಾರಿಭವನವಾಗಿದ್ದ ಕಟ್ಟಡದಲ್ಲಿ ಈಗ ವಸ್ತುಸಂಗ್ರಹಾಲಯ, ಕಲಾಪ್ರದರ್ಶನಾಲಯ ಇವೆ. 

ಕಳ್ಳ ಸಾಗಣೆದಾರರಿಗೂ ತಲೆ ತಪ್ಪಿಸಿಕೊಳ್ಳುವವರಿಗೂ ಇದು ಹಿಂದೆ ಅನುಕೂಲವಾದ ಸ್ಥಳವಾಗಿತ್ತು. ಬ್ರಿಟಿಷ್ ಭಾರತದ ನಡುವೆ ಈ ಚಿಕ್ಕ ಫ್ರೆಂಚ್ ವಸಾಹತು ಇದ್ದದ್ದೂ ಇಲ್ಲಿಂದ ಸುಲಭವಾಗಿ ಬಂಗಾಳ ಕೊಲ್ಲಿಯನ್ನು ಪ್ರವೇಶಿಸಿ ಇತರ ಪ್ರದೇಶಗಳಿಗೆ ಹೋಗಲು ಸುಲಭವಾಗಿದ್ದದ್ದೂ ಇದಕ್ಕೆ ಕಾರಣವಿರಬಹುದು. ಇದು ಬ್ರಿಟಿಷ್ ಭಾರತದಿಂದ ಸುತ್ತವರಿಯಲ್ಪಟ್ಟ ಪುಟ್ಟ ವಸಾಹತಾಗಿದ್ದುದರಿಂದ ಫ್ರೆಂಚರ ಪ್ರತ್ಯೇಕ ಆಡಳಿತದಲ್ಲಿ ಇದು ಪ್ರಗತಿ ಸಾಧಿಸಲಿಲ್ಲ. 1950ರಲ್ಲಿ ನಡೆಸಿದ ಜನಮತಗಣನೆಗೆ ಅನುಗುಣವಾಗಿ ಗಣರಾಜ್ಯ ಭಾರತದಲ್ಲಿ ಇದು ವಿಲೀನಗೊಂಡಿತು. 1951ರಲ್ಲಿ ಇದನ್ನು ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಗೆ ಸೇರಿಸಲಾಯಿತು. ಇಲ್ಲಿ ಮುನಿಸಿಪಲ್ ಕಾರ್ಪೋರೇಷನ್ ಸ್ಥಾಪಿತವಾದ್ದು 1954ರಲ್ಲಿ. ಪಶ್ಚಿಮ ಬಂಗಾಲದ ಒಂದು ಭಾರಿ ಸೆಣಬಿನ ಗಿರಣಿ ಇಲ್ಲಿದೆ. ಕೋಲ್ಕತ ಮತ್ತ ಚಂದ್ರನಗರಗಳ ನಡುವೆ ರೈಲುಸಂಪರ್ಕವಿದೆ. ಬಟ್ಟೆ ನೇಯುವುದು, ಪೀಠೋಪಕರಣಗಳ ತಯಾರಿಕೆ ಇಲ್ಲಿಯ ಪ್ರಧಾನ ಕೈಗಾರಿಕೆಗಳು. ಚಂದ್ರನಗರ-ಚಿನ್ಸುರಾ ಮಾರ್ಗದ ನಡುವೆ, ಇದಕ್ಕೆ ಸಮೀಪದಲ್ಲೇ, ಗೋಸ್ವಾಮಿಘಾಟ್ ಬಳಿ ಕಾಳಿಯ ಒಂದು ಪ್ರಾಚೀನ ದೇವಾಲಯವುಂಟು. ಅದು ಈಗ ಜೀರ್ಣಾವಸ್ಥೆಯಲ್ಲಿದೆ. ಇಲ್ಲಿಯ ವಾಯುಗುಣ ಕೊಲ್ಕೊತ್ತ್ತಕ್ಕಿಂತಲೂ ತಂಪಾದದ್ದು. ಕೊಲ್ಕತ್ತವನ್ನು ಬಿಟ್ಟರೆ ಇತರ ಸ್ಥಳಗಳಿಗೂ ಚಂದ್ರನಗರಕ್ಕೂ ನಡುವೆ ಈಗ ಗಣನೀಯ ವ್ಯಾಪಾರ ನಡೆಯುವುದಿಲ್ಲ.	(ಡಿ.ಎಸ್.ಜೆ.; ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ